ಅಪಾಕ್ಷಿಕಶಕ್ತಿ
	ಯುವಕ ಕವಿಯಾದ ಜಾನ್ ಕೀಟ್ಸನಿಗೆ ಷೇಕ್ಸ್‍ಪಿಯರನಂತೆ ತಾನೂ ಒಬ್ಬ ನಾಟಕಕರ್ತೃವಾಗಬೇಕೆಂಬ ಹೆಬ್ಬಯಕೆ. ಆ ಮಹಾಕವಿಯ ಅತ್ಯಂತ ನಿಷ್ಪಕ್ಷಪಾತವಾದ ದೃಷ್ಟಿ ಕೀಟ್ಸನ ಮನಸ್ಸನ್ನು ಸೂರೆಗೊಂಡಿತು. ನೂರಾರು ಅನುಕಾರ್ಯರನ್ನು ಅವರವರ ಸ್ವಭಾವಕ್ಕೂ ವ್ಯಕ್ತಿವರ್ಚಸ್ಸಿಗೂ ಅನುಗುಣವಾಗಿ ಷೇಕ್ಸ್‍ಪಿಯರ್ ಚಿತ್ರಿಸುತ್ತಾನೆ. ಒಳ್ಳೆಯವರನ್ನು ಹೊಗಳುವುದಿಲ್ಲ, ಕೆಟ್ಟವರನ್ನು ತೆಗಳುವುದಿಲ್ಲ. ತಾದಾತ್ಮ್ಯದಿಂದ ಅವರೇ ತಾನಾಗಿ ಅವರು ನುಡಿಯುವಂತೆ ನಡೆಯುವಂತೆ ಎಸಗುತ್ತಾನೆ. ಇದೊಂದು ಅಗಾಧ ಕೌಶಲ, ನಾಟಕಕ್ಕೆ ಬಲು ಪ್ರಯೋಜಕವಾದ ಕೌಶಲ. ಅದನ್ನು ಪಡೆದ ಕವಿ ದೊಡ್ಡ ಕವಿ, ಏತಕ್ಕೆಂದರೆ ಕೀಟ್ಸನ ಅಭಿಮತದಂತೆ ಅಪಾಕ್ಷಿಕತೆ ನಿಜವಾದ ಶಕ್ತಿ.
	ಈಚಿನ ಕವಿಯೂ ವಿಮರ್ಶಕನೂ ಆದ ಟಿ. ಎಸ್. ಎಲಿಯಟ್ ಕೀಟ್ಸನ ಪದಗುಚ್ಛವನ್ನು ತೆಗೆದುಕೊಂಡು, ಹಿಗ್ಗಲಿಸಿ, ಹೆಚ್ಚು ಅರ್ಥವನ್ನು ತುಂಬಿ, ತನ್ನ ತೀರ್ಪಿನಂತೆ ಯಾವುದು ಉತ್ಕøಷ್ಟ ಕಾವ್ಯಮಾರ್ಗವೋ ಅದಕ್ಕೆ ಅದನ್ನು ಅನ್ವಯಿಸಿದ. ಎಲಿಯಟ್ ಹೇಳುವಂತೆ ಕವಿಯ ವೈಯಕ್ತಿಕ ಆಗುಹೋಗುಗಳಿಗೂ ಅವನ ಕೃತಿವಸ್ತುವಿಗೂ ಏನೇನೂ ಸಂಬಂಧವಿಲ್ಲ, ಸಂಬಂಧವಿರಬಾರದು. ತನ್ನ ವೈಯಕ್ತಿಕ ವ್ಯಕ್ತಿತ್ವದಿಂದ ಬಿಡುಗಡೆ ಹೊಂದುವುದಕ್ಕೋಸ್ಕರವೇ ಕವಿ ಕಾವ್ಯವಸ್ತುವನ್ನು ಕಲ್ಪಿಸಿಕೊಳ್ಳುತ್ತಾನೆ. ವಿಜ್ಞಾನಿ ತನ್ನ ಪ್ರಯೋಗಗಳನ್ನು ನಿಷ್ಠುರಮನದಿಂದ ಕೈಗೊಳ್ಳುವ ಹಾಗೆ ಖಚಿತವಾಗಿಯೂ ರಾಗರಹಿತವಾಗಿಯೂ ಇರಬೇಕು, ಕಾವ್ಯಕಟ್ಟುವ ಕೆಲಸ. ಕವಿಗೆ ಅತ್ಯಾವಶ್ಯಕವಾದದ್ದು ಅಪಾಕ್ಷಿಕಶಕ್ತಿ (ನೆಗೆಟಿವ್ ಕೇಪಬಲಿಟಿ).
	ಸುಮ್ಮನೆ ಸ್ಥೂಲವಾದ ಹೇಳಿಕೆ ಇದು ಎಂಬ ಟೀಕೆಯನ್ನು ಕೆಲವರು ಮಾಡಿದ್ದಾರೆ; ಕಾವ್ಯನಿರ್ಮಾಣದ ಸೂಕ್ಷ್ಮಾಂಶಗಳು ಎಷ್ಟೋ ಇವೆ. ಅವುಗಳಲ್ಲಿ ಒಂದನ್ನೂ ಎಲಿಯಟ್ ಲಕ್ಷ್ಯಕ್ಕೆ ತಂದುಕೊಂಡಿಲ್ಲವೆಂದು ಅವರ ವಾದ.		 (ಎಸ್.ವಿ.ಆರ್.)
ಕೀಟ್ಸನೇ ಷೇಕ್ಸ್‍ಪಿಯರನ ನೆಗೆಟಿವ್ ಕೇಪಬಲಿಟಿಯನ್ನು ಯಾವ ಮಾತುಗಳಲ್ಲಿ ವರ್ಣಿಸುತ್ತಾನೆ ಎನ್ನುವುದು ಸೂಕ್ತ. The capacity of being uncertainities, mysteries, doubts without an irritable reaching after fact and reason. ವಾಸ್ತವಾಂಶ ತರ್ಕಬದ್ಧತೆಗಳಿಗಾಗಿ ಚಡಪಡಿಸದೆ ಅನಿಶ್ಚಯತೆ, ಗೂಢತೆ ಸಂದೇಹಗಳಲ್ಲಿ ಉಳಿಯಬಲ್ಲ ಶಕ್ತಿ ಇದು. ಕೀಟ್ಸನ ಪ್ರಕಾರ ಕೋಲ್‍ರಿಜನಿಗೆ ಈ ಶಕ್ತಿ ಇರಲಿಲ್ಲ. ಕವಿಗೆ ಅಪಾಕ್ಷಿಕ ಶಕ್ತಿ ಇದ್ದರೆ ಕಾರಣಗಳನ್ನು ಕಂಡುಕೊಂಡು ತರ್ಕಬದ್ಧ ಉತ್ತರಗಳನ್ನು ಕಂಡುಕೊಳ್ಳುವ ಅಗತ್ಯವೇ ಇರುವುದಿಲ್ಲ. ಇದನ್ನು ನಿರೂಪಿಸುವ ಸೂತ್ರ ಕೀಟ್ಸ್ ಹೇಳಿದ.The sense of Beauty overcomes every other consideration. (ಸೌಂದರ್ಯಪ್ರಜ್ಞೆಯು ಇನ್ನೆಲ್ಲ ಯೋಜನೆಯ ವಿಷಯಗಳನ್ನು ಬದಿಗೊತ್ತುತ್ತದೆ).
                                 				 
(ಪರಿಷ್ಕರಣೆ: ಪ್ರೊ. ಎಲ್. ಎಸ್.ಶೇಷಗಿರಿರಾವ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ